ಈ ಪುಸ್ತಕ ಹದಿಮೂರು ಸಣ್ಣ ಕತೆಗಳ ಸಂಕಲನವಾಗಿದ್ದು ೨೦೨೧ ನೆ ಇಸವಿಯಲ್ಲಿ ಪ್ರಕಟವಾಗಿರುತ್ತದೆ. ಸತತ ಎರಡು ವಾರ ವಿಶ್ವವಾಣಿ ಟಾಪ್ ಟೆನ್ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಪ್ರಜಾವಾಣಿ ವರ್ಷದ ಪುಸ್ತಕ-2021 ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇದರಲ್ಲಿ ಒಂದು ಕತೆ ಶ್ರೀಲಂಕದ ತಮಿಳು ಮ್ಯಾಗಜಿನ್ ಗೆ ಅನುವಾದಗೊಂಡಿದೆ.
ಪುಸ್ತಕ ಇಲ್ಲಿ ಲಭ್ಯವಿದೆ:
ಪುಸ್ತಕದ ಬಗ್ಗೆ ಓದುಗರ/ವಿಮರ್ಶಕರ ಅಭಿಪ್ರಾಯಗಳು ಹೀಗಿವೆ:-
ಪುಸ್ತಕ ಬಿಡುಗಡೆಯ ದಿನ ಶ್ರೀಯುತ ಜೋಗಿ ಶ್ರೀ ಜಿ ಎನ್ ಮೋಹನ್ ಮತ್ತು ಶ್ರೀಮತಿ ಜಯಶ್ರೀ ಕಾಸರವಳ್ಳಿ
ಕನ್ನಡ ಕಥಾ ಲೋಕದಲ್ಲಿ ಹೊಸ ದನಿಗಳಿವೆ, ಜಯಶ್ರೀ ಕಾಸರವಳ್ಳಿ
ನಿರೂಪಣೆಯ ಹೊಸತನವನ್ನು ಮೆರೆಯುವ ‘ಫೀ ಫೋ’, ಸುನಂದ ಕಡಮೆ
ಕಥೆ, ಕವಿತೆ, ಕಾದಂಬರಿ ಹೀಗೆ ಯಾವುದೇ ಫಿಕ್ಶನ್ ಓದಿದ ಮೇಲೂ ನನ್ನಲ್ಲೊಂದು ಅಸಮಾಧಾನ ಮನೆ ಮಾಡುತ್ತದೆ. ಈ ಬರಹ ನನಗೆ ಪೂರ್ಣ ಅರ್ಥ ಆಗಿದೆಯಾ, ಬರಹಗಾರ ಹೇಳಲು ಪ್ರಯತ್ನಿಸಿದ್ದೆಲ್ಲವೂ ನನ್ನನ್ನು ತಲುಪಿದೆಯಾ, ಈ ಬರಹ ನನಗೇನೋ ವಿಶೇಷ ಅನುಭವ ಕೊಡಬೇಕಾಗಿತ್ತಾ ಮತ್ತು ನಾನು ಅದರಿಂದ ವಂಚಿತನಾಗುತ್ತಿರುವೆನಾ ಅನ್ನುವ ಇತ್ಯಾದಿ ಅಸಮಾಧಾನ. ಈ ಮಾತು ಹೇಳಲು ಕಾರಣವೇನೆಂದರೆ ' ಫೀಪೋ' ಓದಿದ ಮೇಲೂ ನನಗೆ ಹೀಗೆ ಅನಿಸಿದ್ದು.
ಇರಲಿ, ಪುಸ್ತಕದ ಬಗ್ಗೆ ಹೇಳಬೇಕಾದರೆ ಲೇಖಕರಿಗೆ ಕಥೆ ಹೇಳುವ ಕಲೆ ಸಿದ್ಧಿಸಿದೆ. ನಾನು ತುಂಬ ಗಹನವಾದುದನ್ನು ಹೇಳುತ್ತಿರುವೆ ಕೇಳಿಸಿಕೊಳ್ಳಿ ಎನ್ನುವ ಹಮ್ಮಿಲ್ಲದೆ, ತಮ್ಮದೆ ಆದ ಒಂದು ವಿಶೇಷ ಲಹರಿಯಲ್ಲಿ ಅವರು ಕಥೆ ಹೇಳುವ ಪರಿ ಅನನ್ಯ. ಆಗಲೆ ಹೇಳಿದಂತೆ ಇಲ್ಲಿರುವ ಕಥೆಗಳೆಲ್ಲ ನನಗೆ ಅರ್ಥವಾಗಿದೆ ಎಂದು ಹೇಳಲಾರೆ ಆದರೆ ಬಹುತೇಕ ಕಥೆಗಳಲ್ಲಿ ಒಂದೊಂದು ಸಾಲನ್ನೂ ಚಪ್ಪರಿಸಿಕೊಂಡು ಓದಿದ್ದೇನೆ. ಓದುಗನಿಗೆ ಓದುವ ಖುಷಿ ನೀಡಿದರೆ ಅದು ಪುಸ್ತಕದ ಮೊದಲ ಯಶಸ್ಸು. ಅರ್ಥ, ಅನರ್ಥ, ವಿಮರ್ಶೆಗಳೆಲ್ಲ ಆಮೇಲೆ.
'ಕಣಿವೆಯಲ್ಲೊಂದು ಸಂಜೆ ', 'ಬೆಳ್ಳಿಗೆರೆ', ಈ ಸಂಕಲನದಲ್ಲಿ ನನಗೆ ಅತಿ ಹೆಚ್ಚು ಇಷ್ಟವಾದ ಕಥೆಗಳು. ಬೆಳ್ಳಿಗೆರೆ ನಿಜವಾಗಿಯೂ ಟ್ರ್ಯಾಜಿಕ್ ಎಂಡಿಂಗ್ ಇರುವ ಕಥೆ, ಲೇಖಕರು ಅದನ್ನು ಹ್ಯಾಪಿ ಎಂಡಿಂಗ್ ಎಂಬಂತೆ ಮುಗಿಸಿ ವಿನೋದ, ನವೀನರಿಗೆ ದ್ರೋಹ ಬಗೆದಿದ್ದಾರೆ ಎಂಬುದು ನನ್ನ ಬಲವಾದ ನಂಬಿಕೆ.
- ಅನಿಲ್ ಚತ್ನಳ್ಳಿ
ಇಲ್ಲಿನ ಪ್ರತಿಯೊಂದು ಕತೆಯೂ ಒಂದಲ್ಲ ಒಂದು ಕಾರಣದಿಂದ ವಿಭಿನ್ನವಾಗಿದೆ ಮತ್ತು ನನಗೆ ಓದಿನ ಖುಷಿ ಕೊಟ್ಟಿದೆ; ಇಲ್ಲಿ ಕೆಲವು ಕತೆಗಳ ಬಗ್ಗೆ ಮಾತ್ರ ಹೇಳುವೆ.
ಒಂದು ಅ -ಸಹ್ಯ ಕತೆ:
If there's a book that you want to read, but it hasn't been written yet, then you must write it.
-Toni Morrison
ಈ ಮಾತಿನ ಸ್ವರೂಪ ಕೂಡ ಈ ಕತೆ!
ನಿರೂಪಕನ ಸ್ವಗತದಂತೆ ಕಾಣುವ ಈ ಕತೆ ಒಬ್ಬ ಯುವ ಲೇಖಕನ ಬರವಣಿಗೆ ಮತ್ತು ಅವನ ಓದುಗನೊಂದಿಗಿನ ಸಂಭಾಷಣೆಯನ್ನು ಬಹಳ ಚೆನ್ನಾಗಿ ಹೇಳಿದೆ. ಲೇಖಕ ಬರೆದಿರದ ಕತೆಯನ್ನು ಓದಿಬಿಟ್ಟ ಓದುಗ ತಕರಾರು ಮಾಡಿ ಝಾಡಿಸಿದಾಗೆಲ್ಲಾ ಗುಡ್ಡದ ಮೇಲಿಂದ ಜಿಗಿದು ಬಿಡುವ ಲೇಖಕನಿಗೆ ರೆಕ್ಕೆಗಳು ಮೂಡಿಬಿಡುತ್ತವೆ! ಒಮ್ಮೆ ನನಗೆ ಹೀಗೂ ಅನಿಸಿತು. ತಮ್ಮ ಮುಂದಿನ ಕತೆಗಳನ್ನು ಓದಲು ಸ್ವಲ್ಪ ಎತ್ತರಕ್ಕೇರಿ ಎಂದು ಓದುಗರಿಗೆ ಹೇಳುತ್ತಿದಾರೆನೋ ಅಂತ!
ಬೇಟೆ:
ಹಸಿವಿಗಿಂತ ಬೇರೆ ಧರ್ಮವಿಲ್ಲ; ತಾನೂ ಒಬ್ಬ ಪ್ರಾಣಿ ಎನ್ನುವುದನ್ನು ಮರೆತು ಮನುಷ್ಯತ್ವ ಮೆರೆಯಬೇಕಾದ ಮನುಷ್ಯನ ತಲ್ಲಣಗಳನ್ನು ಅದ್ಭುತವಾಗಿ ಹೇಳಿದ್ದಾರೆ. ಇಲ್ಲಿನ ಅಧ್ಯಾತ್ಮದ ಚಿಂತನೆ, ಶಾಸ್ತ್ರೀಯ ಭಾಷೆಯ ಬಳಕೆ ಹಳೆಯ ಕ್ಲಾಸಿಕ್ಸ್ ಓದಿದ ಅನುಭವ ಕೊಡುತ್ತದೆ.
ಪ್ರದಕ್ಷಿಣೆ:
Gone girl ಎಂಬ ಇಂಗ್ಲೀಷ್ ಸಿನಿಮಾದ ಓಪನಿಂಗ್ ಸೀನ್ ನೆನೆಸಿತು ಈ ಕತೆ. ಹತ್ತು ವರ್ಷಗಳ ಕಾಲ ಲಿವ್ ಇನ್ ಸಂಬಂಧದಲ್ಲಿರುವ ಹುಡುಗ ಹುಡುಗಿಯ ನಡುವಿನ ವಿಶ್ವಾಸ, ಪರಸ್ಪರ ನಂಬಿಕೆಗಳನ್ನು ಪ್ರಶ್ನಿಸಿ, ಮದುವೆ ಬಂಧನಗಳ ಕುರಿತ ತಲ್ಲಣಗಳನ್ನು ಬಹಳ ಚೆನ್ನಾಗಿ ತೋರಿಸಿದ್ದಾರೆ. ಉಸಿರಾಗಿದ್ದ ಪ್ರೀತಿ ಪ್ರೇಮ ಬರ್ತಾ ಬರ್ತ ಒಬ್ಬರನೊಬ್ಬರು ಇರಿಯಲು ಬಳಸುವ ಆಯುಧವಾಗುವುದು ವಿಷಾದ!
ಓಯಾಸಿಸ್:
ಇದು ಸಂಕಲನದ ಬೆಸ್ಟ್ ಕತೆ ಅನಿಸಿತು. ತನ್ನ ಗಂಡ ಅಥವಾ ಮಗ ಇಬ್ಬರಲ್ಲಿ ಒಬ್ಬರು ಮಾಡಿದ ತಪ್ಪಿಗೆ ತನ್ನವರನ್ನು ಕಳೆದುಕೊಂಡ ನತದೃಷ್ಟ ಮನೆಯೊಡತಿಯ ಮುಂದೆ ನಿಂತಿದ್ದಾನೆ; ಅವರನ್ನು ಶಿಕ್ಷಿಸಲು ಒಪ್ಪಿಸುವಂತೆ ಕೇಳುತ್ತಿದ್ದಾನೆ. ಒಡತಿ ಏನು ಮಾಡುತ್ತಾಳೆ? ಶಿಕ್ಷಿಸಿದವನು ನೆಮ್ಮದಿ ಕಂಡನೇ? ಇಲ್ಲಿಯೂ ಜೀವನದ ತತ್ವ, ಸರಿ ತಪ್ಪುಗಳ ನಡುವಿನ ಗೊಂದಲ, ಪ್ರಾಯಶ್ಚಿತ್ತ ಯಾರು ಯಾರನ್ನು ದೂಷಿಸುವುದು ಎಂಬೆಲ್ಲಾ ಅಂಶಗಳು ಚೆನ್ನಾಗಿ ಮೂಡಿ ಬಂದಿವೆ. ಸಂಭಾಷಣೆಯೇ ಜೀವವಾದ ಈ ಕತೆಯಲ್ಲಿ ಆಡು ಭಾಷೆಯನ್ನು ಬಳಸಿದ್ದರೆ ಇನ್ನೂ ಸಹಜವಾಗಿಸಬಹುದಿತ್ತು.
ಅನಾಹಿತ:
ಕಾಫ್ಕಾ ನ ಪ್ರಖ್ಯಾತ ಕತೆ metamorphosis ನಲ್ಲಿ ಒಬ್ಬ ಮನುಷ್ಯ ಒಂದು ಜಿರಳೆಯಾಗುವುದನ್ನು ಓದಿದ್ದೇನೆ. ಅಂತೆಯೇ ಒಬ್ಬ ಲೇಖಕನ ಕಲ್ಪನೆ ಹೇಗೆಲ್ಲಾ ಇರಬಹುದು ಎನ್ನುವುದಕ್ಕೆ ಈ ಕತೆಯೇ ಒಂದು ನಿದರ್ಶನವಾಗಿದೆ. ಒಂದು ಪಾರ್ಕಿನಲ್ಲಿ ಶಿಲಾಬಾಲಿಕೆಯ ಸೊಂಟದ ಮೇಲಿನ ಕೊಡದಿಂದ ಧುಮುಕುವ ನೀರು, ಅದೇ ಪಾರ್ಕಿನಲ್ಲಿ ದಿನವೂ ವಾಕ್ ಮಾಡುವ ಹಣ್ಣು ಮುದುಕನೊಂದಿಗೆ ಜೀವನವನ್ನು ಅದಲಿ ಬದಲಿ ಮಾಡಿಕೊಂಡರೆ ಏನೆಲ್ಲಾ ಆಗಬಹುದು ಎನ್ನುವುದು ವಿಷಾದದ ನಡುವೆಯೂ ಮಜವಾಗಿದೆ. ಸುಖೀ ಪುರುಷನ ಮಾತುಗಳ excerpts ಕೆಳಗಿನ ಚಿತ್ರಗಳಲ್ಲಿದೆ.
ಬೆಳ್ಳಿಗೆರೆ:
ವಸತಿ ಶಾಲೆಯ ಹುಡುಗರ ಅವಾಂತರಗಳನ್ನು ಮಧು ಹಾಗೇ ನವೋದಯ ವಿದ್ಯಾಲಯದಲ್ಲಿ ಓದಿದ ನಾನು ಕಣ್ಣೆದುರೇ ನಡೆಯುತ್ತಿರುವಂತೆ ಆಸ್ವಾದಿಸಿದೆ!
ಹೀಗೆ ಬಹಳ ಹೊಸತನದಿಂದ ಕೂಡಿದ ಇನ್ನೂ ಹಲವು ಕತೆಗಳನ್ನು ಓದಲು ನೀಡಿದ ಮಧುಗೆ ಅಭಿನಂದನೆಗಳು!
- ಪೂರ್ಣಿಮ ಮಾಳಗಿಮನಿ
Profound,
Stunned,
- Readers