karehannu

ಕಾರೇಹಣ್ಣು- ಸಣ್ಣ ಕಥಾಸಂಕಲನ (2019)

ಈ ಪುಸ್ತಕ ಹತ್ತು ಸಣ್ಣ ಕತೆಗಳ ಸಂಕಲನವಾಗಿದ್ದು ೨೦೧೯ ನೆ ಇಸವಿಯ "ಈ ಹೊತ್ತಿಗೆ" ಪ್ರಶಸ್ತಿಗೆ ಭಾಜನವಾಗಿದೆ

ಪುಸ್ತಕ ಇಲ್ಲಿ ಲಭ್ಯವಿದೆ:

ಋತುಮಾನ ಆಂಡ್ರಾಯ್ಡ್‌ ಆಪ್‌ ನಲ್ಲಿ ಈ ಬುಕ್

ನವಕರ್ನಾಟಕ

ಪುಸ್ತಕದ ಬಗ್ಗೆ ಓದುಗರ/ವಿಮರ್ಶಕರ ಅಭಿಪ್ರಾಯಗಳು ಹೀಗಿವೆ:-

ಗೂಡ್‌ ರೀಡ್ಸ್

ಬದುಕಿನ ಘನತೆಯ್ನು ಎತ್ತಿಹಿಡಿಯುವ ಕಾರೇಹಣ್ಣು, ವಾರ್ತಾಭಾರತಿ

ಭಿನ್ನ ರುಚಿಯ ಕಾರೇಹಣ್ಣು, ನ್ಯೂಸಿಕ್ಸ್

ಭರವಸೆಯ ಕತೆಗಾರನೊಬ್ಬನ ಪ್ರವೇಶ, ಅವಧಿಇಷ್ಟವಾಯ್ತು. ನಿಮ್ಮ ನಿರ್ಬಾವುಕ ಶೈಲಿಯ ಕಥನ ನಿರೂಪಣೆ ಮೆಚ್ಚತಕ್ಕದ್ದು. ಮೋನಾಲಿಸದ ಸ್ತಬ್ಧ ಚಿತ್ರವನ್ನು ನೋಡುವ ಪರಿಯಿಂದ ಹಿಡಿದು ರಸ್ತೆ ಬದಿಯ ತಿಂಡಿ ಮಾರುವವನ ಮನಸ್ಥಿತಿಯ ಅವಲೋಕನದ ವರೆಗೂ ವಿಸ್ತರಿಸಿದೆ ನಿಮ್ಮ ಕತೆಯ ವ್ಯಾಪ್ತಿ. ಹಲವು ಕತೆಗಳು ವಸ್ತು ಹಾಗೂ ವಿನ್ಯಾಸದಲ್ಲಿಯೂ ಫ್ರೆಷ್ ಅನ್ನಿಸಿದವು.
- ಕರ್ಕಿ ಕೃಷ್ಣಮೂರ್ತಿ


ನಾನು ಇದುವರೆಗೂ ಓದಿದ ಅಸಂಖ್ಯ ಕಥೆಗಳಲ್ಲಿ ವಿಭಿನ್ನವಾಗಿ ನಿಲ್ಲುವ, ಹೊಸ ಸಂವೇದನೆಗಳನ್ನೊಳಗೊಂಡ ಕಥೆಗಳ ಸಂಕಲನ ಮಧುಸೂಧನ್ ಅವರ “ಕಾರೆ ಹಣ್ಣು”. ಆಯ್ದುಕೊಂಡ ವಿಷಯಗಳಿಂದಲೇ ಗಮನ ಸೆಳೆಯುವ ಇಲ್ಲಿನ ಕಥೆಗಳು ತಮ್ಮ ಆಕರ್ಷಕ ನಡಿಗೆ ಮತ್ತು ಸರಳ ನಿರೂಪಣೆಯಿಂದ ಓದುಗನನ್ನು ಇನ್ನಿಲ್ಲದಂತೆ ಆವರಿಸಿಕೊಂಡುಬಿಡುತ್ತವೆ, ಒಳಗಿಳಿದು ಉಳಿದುಬಿಡುತ್ತವೆ. ಘಟನೆ, ಸನ್ನವೇಶ ಮತ್ತವುಗಳಿಗೆ ಪಾತ್ರಗಳು ಪ್ರತಿಕ್ರಿಯಿಸುವ ರೀತಿ ಗಾಢವಾಗಿ ಕಾಡತೊಡಗುತ್ತವೆ. ಬಹುಶಃ ಒಂದು ಕಥೆಯ ಬಹುದೊಡ್ಡ ಶಕ್ತಿಯಿದು. ಯಾವುದೊಂದು ಸಿದ್ಧ ಮಾದರಿಗೆ ಕಟ್ಟು ಬೀಳದೇ ಒಲಿದಂತೆ ಹಾಡಿದ ಕಥೆಗಾರನ ಈ ಪ್ರಾಮಾಣಿಕತೆಯೇ ಅವನನ್ನು ಗೆಲ್ಲಿಸಿದೆಯೆನಿಸುತ್ತದೆ. “ನನ್ನ ಪ್ರೀತಿಯ..” ಮತ್ತು “ಯುಗ ಯುಗಗಳ ದಾಟಿ” ಯಂತಹ ಒಂದೇ ಉಸಿರಿಗೆ ಓದಿಯೇ ಬಿಡಬೇಕೆನ್ನುವ ಹಂಬಲವನ್ನು ಕೆರಳಿಸುವ, ಫ್ಯಾಂಟಸಿಯ ಗುಂಗಿನಲ್ಲಿ ಓದುಗನನ್ನು ಸೆರೆ ಹಿಡಿದುಬಿಡುವ ಕಥೆಗಳು ಇದುವರೆಗೆ ಕನ್ನಡ ಕಥಾಲೋಕ ಕಂಡಿರದ ವಿಭಿನ್ನ ರೀತಿಯ ಸಂವೇದನೆಗಳು. “ಕನಸು” ಮತ್ತು “ಚಿಟ್ ಶೀಟ್ “ನಂತಹ ಕಥೆಗಳ ವಸ್ತು ಹಳೆಯದಾದರೂ ನಿಭಾಯಿಸುವ ಪರಿ ನವನವೀನ. ಇಲ್ಲಿನ ಕೆಲವು ಕಥೆಗಳಲ್ಲಿ ಗ್ರಾಮೀಣ ಪರಿಸರದ ವಿವರಗಳಿದ್ದರೂ ಸವಕಲು ನಿರೂಪಣಾ ಕ್ರಮಕ್ಕೆ ಶರಣಾಗದೇ ತುಂಬಾ ಚುರುಕಾದ ರೀತಿಯಲ್ಲಿ ಬಡಿಸುವ ಕಥೆಗಾರನ ಪ್ರತಿಭೆ ಅಗಾಧವಾದದ್ದು. ನಗರೀಕೃತ ಕಾಂಕ್ರೀಟ್ ಕಾಡಿನ ವರ್ಣನೆಯೂ ಅಷ್ಟೇ ಮಧು ಅವರು ತಮ್ಮ ಕುಶಲತೆಯಿಂದ ಅದಕ್ಕೊಂದು ಬೇರೆಯದೇ ರುಚಿಯನ್ನು ಕೊಟ್ಟು ಒಂದು ಹೊಸ ಟ್ರೆಂಡ್ ಸೃಷ್ಟಿ ಮಾಡಿದ್ದಾರೆ. ಇವರ ಪಾತ್ರಗಳು ಗ್ರಾಮೀಣ ಮತ್ತು ನಗರ ಜೀವನದ (ದೇಸೀ ಮತ್ತು ವಿದೇಸೀ ಎಂದು ಹೇಳಿದರೂ ಆದೀತು)ಪಲಕುಗಳಲ್ಲಿನ ಕೊಂಡಿಗಳನ್ನು ತಳುಕು ಹಾಕುತ್ತ ಪರಸ್ಪರ ಬಿಡಿಸಿಕೊಳ್ಳುತ್ತ ಮತ್ತೆ ತಳುಕು ಹಾಕಿಕೊಳ್ಳುತ್ತ ತಮ ತಮಗೆ ತಿಳಿದಂತೆ ಬದುಕಿನ ಆಯಾಮಗಳನ್ನು ಅರ್ಥೈಸಿಕೊಳ್ಳುವ ಹವಣಿಕೆಯನ್ನು ಮಧು ಯಾವ ಪೂರ್ವಾಗ್ರಹವೂ ಇಲ್ಲದೇ ಯಾವ ಎಚ್ಚರವೂ ಇಲ್ಲದೆ ನಿರಾಳವಾಗಿ ಹೇಳಿಬಿಡುತ್ತಾರೆ. ಆಶ್ಚರ್ಯವೆಂದರೆ ಅದು ಒಂದಿಂಚು ಹೆಚ್ಚೂ ಆಗದೇ ಒಂದಿಂಚು ಕಡಿಮೆಯೂ ಆಗದೇ ತೂಗಿ ತೂಗಿ ಇಟ್ಟಂತೆನಿಸುತ್ತದೆ. “ಹುಡುಕಾಟ”ಮತ್ತು “ ಕನಸು” ನಂತಹ ಶಕ್ತಿಯುತ ಕಥೆಗಳ ಮುಖೇನ ಯಶವಂತ ಚಿತ್ತಾಲರನ್ನು ನೆನಪಿಸಿಬಿಡುತ್ತಾರೆ ಅವರಿಗೇ ಗೊತ್ತಿಲ್ಲದಂತೆ. “ಬೋಣಿ”ಯಂತಹ ಕಥೆಗಳಲ್ಲಿನ ತಣ್ಣನೆಯ ಕ್ರೌರ್ಯ ತೀವ್ರವಾಗಿ ತಟ್ಟುತ್ತದೆ ಓದುಗನನ್ನು. ತಮ್ಮ ಪರಿಣಾಮಕಾರಿ ಕಥೆಗಳ ಮುಖಾಂತರ ಕನ್ನಡ ಕಥಾಲೋಕಕ್ಕೊಂದು ವಿಭಿನ್ನ ಸಂವೇದನೆಯನ್ನು ನೀಡಿದ ಮಧು ಅಭಿನಂದನಾರ್ಹರು.
- ಮಾರುತಿ ದಾಸಣ್ಣವರ


ಕತೆಗಳು ಸಹ ಹೊಸ ತಾಜಾತನದಿಂದ ಓದಿಸಿಕೊಳ್ಳುತ್ತವೆ. ನಿಮ್ಮ ಭಾಷೆಯ ಮೇಲಿನ ಹಿಡಿತ ಕೂಡ ಮೆಚ್ಚಲೇಬೇಕಾದ್ದು. ಆದರೆ ಕತೆಯ landing ಕಡೆಗೆ ಮತ್ತಷ್ಟು ಗಮನ ಕೊಡಿ. ಓದುಗನಿಗೆ ಆ ಹಂತದಲ್ಲಿ ಏನಾದರೂ ಮ್ಯಾಜಿಕ್ ಆಗಬೇಕು. ಅಥವಾ ಅವನಿಗೆ ಗೊತ್ತಿಲ್ಲದ ಹೊಸದೊಂದು ಅನುಭವ ಆಗಬೇಕು. "ಚೀಟ್ ಷೀಟ್" ಕತೆಯು ಅದ್ಭುತವಾಗಿ ಬೆಳೆಯುತ್ತದೆ. ಆದರೆ ಅಂತ್ಯವು ತೆಳು ಎನಿಸುತ್ತದೆ. ಹಾಗೆಯೇ "ಕಡಲ ತೀರದ ಬಿಸಿಗಾಳಿ" ಮತ್ತು "ಕನಸು" ಸಹ ಏನೋ ಹೊಸದೆನಿಸುವ ಲೋಕವನ್ನು ತೆತೆದಿಡುತ್ತವೆ. ಆದರೆ ಅಂತಿಮವಾಗಿ ಓದುಗನ ಮನಸ್ಸನ್ನು ಅಲುಗಿಸುವಂತೆ ಮಾಡದೆ ಮುಗಿದು ಹೋಗುತ್ತವೆ. "ಬೋಣಿ", " ನಿಜಗುಣ ದರ್ಶನ", "ಹುಡುಕಾಟ" ಸಹ ಇಷ್ಟ ಆಯಿತು.
- ಬಿ ಸುರೇಶ


ಗಾಜಿನ ಬಾಟಲಿಯೊಳಗೆ ಪುಟ್ಟ ಪುಟ್ಟ ಕಲ್ಲುಗಳನ್ನು ಹಾಕಿ, ಕಾಯಿಗಳು ಹಣ್ಣು ಆಗೋದನ್ನ ಪದೇ ಪದೇ ನೋಡ್ತಾ ಬಾಯಲ್ಲಿ ನೀರೂರಿಸುವ ದಿನಗಳು ನೆನಪಿಗೆ ಬಂದವು. 🤩 ನಿಮ್ಮ ಕಥೆಗಳು ಒಂದು ಕ್ಷಣ ಆಧುನಿಕತೆಯ ಸಂದಿಗ್ಧ ಬದುಕನ್ನ ಬಾಚಿ, ಚಾಚಿ, ಗೀಚಿ, ನನ್ನ ಮುಂದೆ ತೆರೆದಿಟ್ಟಿತು. ವೈವಿಧ್ಯತೆಯಿಂದ ಕೂಡಿದ, ವಿಭಿನ್ನ ಪಾತಳಿಯಿಂದ ಮೇಲೆದ್ದು ಮೈ ತಳೆದ ಕಥೆಗಳಿವು. ದೆಹಲಿಯ ಪ್ರಯಾಣದುದ್ದಕ್ಕೂ ನನ್ನ ಒಳ ಹೊರಗನ್ನು ವ್ಯಾಪಿಸಿಕೊಂಡ ಸಹವರ್ತಿ ಆಗಿತ್ತು. ಮೊದಲ ಪುಸ್ತಕದಲ್ಲೇ ಇಷ್ಟು ಅರ್ಥವ್ಯಾಪ್ತಿಯುಳ್ಳ, ವಿಸ್ತಾರವುಳ್ಳ, ವಿಭಿನ್ನತೆಯುಳ್ಳ, ಕಥಾಸಂಕಲನ ಕೊಟ್ಟ ನಿಮಗೆ ಹಹೃದಯಪೂರ್ವಕ ಅಭಿನಂದನೆಗಳು
- ಆರತಿ ಹೆಚ್‌ ಎನ್


ಸಂಕಲನದ "ಚೀಟ್‌ ಶೀಟ್"‌ ಕತೆ ಎಲ್ಲ ಕಡೆಯಿಂದಲೂ ಪರಿಪೂರ್ಣವಾದ ಅತ್ಯುತ್ತಮ ಕತೆ. ʼಬೋಣಿʼ ʼನನ್ನ ಪ್ರೀತಿಯʼ ಎರಡೂ ಅತ್ಯಾಸಕ್ತಿಯಿಂದ ಓದಿಸಿಕೊಳ್ಳುತ್ತವೆ. ನಿಮ್ಮ ಕತೆಗಳ ಶಕ್ತಿ ನಿಮ್ಮ ಸಹಜ ನಿರೂಪಣೆ. ಒಟ್ಟಾರೆ ಸಂಕಲನ ನಿಮ್ಮೊಳಗಿನ ಕತೆಗಾರನ ಬಗ್ಗೆ ಮೆಚ್ಚುಗೆ, ಭರವಸೆ, ಪ್ರೀತಿ ಹುಟ್ಟಿಸಿವೆ
- ಲಲಿತ ಸಿದ್ಧಬಸವಯ್ಯ


ನಿಮ್ಮ ಕತೆಗಳ ಓದು ನಿಜಕ್ಕೂ ಖುಷಿ ಕೊಟ್ಟಿತು. ಹತ್ತು ಕತೆಗಳಲ್ಲಿ ಎಲ್ಲೂ ಮೊದಲ ಸಂಕಲನದ ಗೊಂದಲ, ಗಡಿಬಿಡಿ ಕಾಣದ್ದು ಒಂದು ಕಾರಣವಾದರೆ, ಹತ್ತೂ ಕತೆಗಳಲ್ಲಿ ಕಂಡ ವೈವಿಧ್ಯತೆ ಮತ್ತೊಂದು ಕಾರಣ. ಒಂದೆರಡು ಕತೆಗಳಿಗೆ ಮಾತ್ರ ಇನ್ನಷ್ಟು ಸ್ಪಷ್ಟತೆ ಬೇಕೆತ್ತೇನೋ ಅನ್ನಿಸಿದರೂ ಒಟ್ಟಾರೆಯಾಗಿ ಹೊಸ ಅಲೋಚನೆಗಳಿಂದ ಮೈದಾಳಿರಿವ ಕತೆಗಳು ಫ್ರೆಶ್ ಅನ್ನಿಸುತ್ತವೆ. ನನ್ನ ಪ್ರೀತಿಯ, ಮುಲಾಮು, ನೋಟ, ಸಾಮಾನ್ಯವಾಗಿ ಈಗಾಗಲೇ ಬಂದಂತಹ ಕತೆಗಳ ಜಾಡನ್ನೇ ಸುಲಭವಾಗಿ ಹಿಡಿಯಬಹುದಾಗಿತ್ತು, ಆದರೆ ಅತ್ಯಂತ ಶ್ರದ್ಧೆಯಿಂದ ಹೂವನ್ನು ಮೃದುವಾಗಿ ಹಿಡಿದು, ಪೋಣಿಸಿ ದುಂಡಗಿನ ಮಾಲೆ ಕಟ್ಟಿದಂತೆ ನಾಜೂಕಾಗಿ ಕತೆ ಹೆಣೆದಿರುವುದರಿಂದಲೇ ನವಿರಾದ ಕಂಪಿನಿಂದ ಕೂಡಿವೆ. ಮುಲಾಮು ಬಹುಶಃ ಈ ಸಂಕಲನದ ಅತ್ಯುತ್ತಮ ಕತೆ. ಇಂತಹದ್ದೇ ಜಾಡಿನ ಅದೆಷ್ಟೋ ಕತೆಗಳು, ಸಿನಿಮಾಗಳು ಬಂದ ನಂತರವೂ ಭಾವುಕತೆಯನ್ನು ಮೀರಿದ ತಾಜಾತನವನ್ನು ಉಳಿಸಿಕೊಂಡಿದ್ದು ಕಂಡು, ಬರವಣಿಗೆಯ ಮೇಲಿನ ನಿಮ್ಮ ಹಿಡಿತ ಸ್ವಲ್ಪ ಆಶ್ಚರ್ಯವನ್ನು ತಂದಿತು. ಬಹುಶಃ ರೂಢಿಗತ ಜಾಡಿನಲ್ಲಿ ಸಾಗಬಾರದೆಂದು ಅತ್ಯಂತ ಮುತುವರ್ಜಿ ವಹಿಸಿ, ಎಚ್ಚರಿಕೆಯಲ್ಲೇ ನೀವು ಹೆಜ್ಜೆ ಇಟ್ಟಿರಬಹುದಾದರೂ, ಅದರ ಕಿಂಚಿತ್ತು ಸುಳಿವನ್ನೂ ಬಿಟ್ಟುಕೊಟ್ಟಿಲ್ಲ. ನನ್ನ ಪ್ರೀತಿಯ ( ಎಂ.ಆರ್.ದತ್ತಾತ್ರಿ ಅವರ ತಾರಾಬಾಯಿಯ ಪತ್ರ ಕಾದಂಬರಿಯಲ್ಲೂ ಇಂತಹದ್ದೇ ನಿರೂಪಣೆಯಿದೆ) ಕತೆ ಕಡೆಯಲ್ಲಿ ಸ್ವಲ್ಪ ವಾಚ್ಯವಾಗಿ ವರದಿ ರೂಪ ತಾಳಿತೇನೋ ಅನ್ನಿಸಿದರೂ, ಕತೆಯ ನಿರೂಪಣಾ ದೃಷ್ಟಿಯಿಂದ ಸುಂದರವಾಗಿ ಮೂಡಿದೆ ಅನ್ನಿಸಿತು. ಯುಗ ಯುಗಗಳ ದಾಟಿ, ಚೀಟ್ ಶೀಟ್ ಬಹಳ ವಿಭಿನ್ನ ರೀತಿಯ ಕತೆಗಳು. ಕನಸು - ಭ್ರಮೆ ವಾಸ್ತವಗಳ ನಡುವಿನ ಕತೆ - ಕನಸು ವೈಯಕ್ತಿಕವಾಗಿ ಇಷ್ಟವಾದ ಕತೆ. ಕತೆಯ ನಿರೂಪಣೆಯಲ್ಲಿನ ನಿರ್ಭಾವುಕತೆ ಮತ್ತು ಸಮರ್ಥ ಭಾಷೆ ನಿಮ್ಮ ಕತೆಗಳ ಜೀವಾಳ. ನಗರ - ಗ್ರಾಮ್ಯಗಳ ಸಮ್ಮಿಶ್ರಣ ಬಹಳ ಸಹಜವಾಗಿ ಕತೆಯೊಳಗೆ ಮಿಳಿತವಾಗಿ ನಿಮ್ಮದೇಯಾದ ಒಂದು ಶೈಲಿ ನಿಮಗೆ ದಕ್ಕಿದೆ. ಎಲ್ಲೂ ವಾಚ್ಯವಾಗಿಸುವುದಿಲ್ಲ - ಇವೆಲ್ಲಾ ಇಷ್ಟವಾದ ಸಂಗತಿ. ಸಾಮಾನ್ಯವಾಗಿ ಮೊದಲ ಕಥಾಸಂಕಲನ ಇಷ್ಟು ಬಿಗಿ ನಿರೂಪಣೆಯಲ್ಲಿ ಇರುವುದಿಲ್ಲ ನಿಮ್ಮ ಈ ಅಪರೂಪದ ಶೈಲಿಯಲ್ಲಿ ಇನ್ನಷ್ಟು ಕತೆಗಳು ಮೂಡಿ ಬರಲಿ. ಮತ್ತೊಮ್ಮೆ ನಿಮಗೆ ಅಭಿನಂದನೆಗಳು.
ಪ್ರೀತಿಯಿಂದ,
ಜಯಶ್ರೀ ಕಾಸರವಳ್ಳಿ


ಸಣ್ಣ ಸಣ್ಣ ಘಟನೆಗಳನ್ನ ಮನುಷ್ಯನ ಸ್ವಭಾವಗಳನ್ನ ಕತೆಯಾಗಿಸಿರುವುದು..ನಿಮ್ಮ ಭಾಷೆ..ತುಂಬ ಇಷ್ಟವಾಯಿತು
- ವ್ಯಾಸರಾವ್‌ ನಿಂಜೂರ


ಮೊದಲೆರಡು ಕತೆಗಳನ್ನು ಓದಿದೆ, ತುಂಬ ತುಂಬ ಇಷ್ಟವಾದವು
- ಕೆ ವಿ ತಿರುಮಲೇಶ್


I liked the collection. Some of them are very good. I especially liked 'Mulamu' and 'Nanna preetiya'. There is a new sensibility in these stories. You have a good language too. Some of the themse are so very different from the usual ones. In all you have the courage to take up new themes. Yours is a refreshing voice.
- Vivek shanbag.


ಸರಳ ಭಾಷೆಯ ಹತ್ತು ಕಥೆಗಳು ಎಲ್ಲವೂ ಒಂದಕ್ಕಿಂತ ಒಂದು ಭಿನ್ನ... ಓದಿಯಾದ ತಕ್ಷಣಕ್ಕೆ ಕಲಕುವ, ಕಾಡುವ, ಅರೆ ಈ ಕಥೆ ಇವರು ಬರೆದಿದ್ದು ಹೇಗಪ್ಪ ಎಂದುಕೊಳ್ಳದೇ ಇರಲು ಸಾಧ್ಯವಿಲ್ಲ. ಮೊದಲ ಕತೆ 'ನನ್ನ ಪ್ರೀತಿಯ' ಓದುಗನ ಲೆಕ್ಕಾಚಾರವನ್ನೇ ಬುಡಮೇಲು ಮಾಡುತ್ತದೆ. ನಾನಂತೂ ಹೀಗೊಂದು ವ್ಯಕ್ತಿ ಇರಲು ಸಾಧ್ಯವಾ ಎಂದು ತಲೆ ಕೆಡಿಸಿಕೊಂಡಿದ್ದೆ. ಮುಲಾಮು.. ಬೋಣಿ.. ಯಾವ ತಕರಾರು ಇಲ್ಲದೆ ವಾಸ್ತವಿಕತೆಯ ನೆಲೆಗಟ್ಟಿನಲ್ಲಿ ಮನುಷ್ಯ ಸಂಬಂಧಗಳನ್ನು ಗಟ್ಟಿ ಬೆಸೆಯುವಂತಹ ಕತೆಗಳಾದರೆ, ಹುಡುಕಾಟ ತೀವ್ರವಾಗಿ ಕಾಡುವಂತಹ ಕತೆ. ಯುಗ ಯುಗಗಳ ದಾಟಿ ಮನಸ್ಸೆಳವ ಮತ್ತು ನಾವು ಕಾಣದ ಲೋಕವನ್ನು ಕಾಣಿಸುವ ಕತೆ. ಇದರಲ್ಲಿ ಮಧುರವರ ಕಲ್ಪನಾ ಶಕ್ತಿಯನ್ನು ಢಾಳಾಗಿ ಕಾಣಬಹುದು. ಒಂದು ವೇಳೆ ಲೇಖಕ ಇದು ತನ್ನ ಮೊದಲ ಹೊತ್ತಿಗೆ ಅಂತ ಹೇಳದೇ ಇದ್ದರೆ ಅದು ತಿಳಿಯುವ ಸಾಧ್ಯತೆಯೇ ಇಲ್ಲದಂತಹ ಪ್ರಬುದ್ಧ ಆಲೋಚನೆಯ... ಮಾಗಿದ ಕತೆಗಳು ಇಲ್ಲಿವೆ.
- ದೀಪ್ತಿ ಭದ್ರಾವತಿ